ನಾಯಿ
ಮನುಷ್ಯ ಪಳಗಿಸಿದ ಪ್ರಾಣಿಗಳಲ್ಲೆಲ್ಲಾ ಪ್ರಾಚೀನತಮವಾದದ್ದು. ಮನುಷ್ಯನಿರುವೆಡೆಗಳಲ್ಲೆಲ್ಲಾ ಇರುವುದು. ನಾಯಿ ಮನುಷ್ಯನ ಒಡನಾಡಿ. ಗೆಳೆಯ ಮತ್ತು ನಿಷ್ಠ ಸೇವಕ. ಇದು ಸಕಲ ಭೂಭಾಗಗಳಲ್ಲಿಯೂ ಜೀವಿಸಬಲ್ಲದು. ನಾಯಿ ಅಸಿಲಿಯನ್ ಸಂಸ್ಕøತಿಯ ಕಾಲದಿಂದಲೂ ಅಂದರೆ ಮಧ್ಯಶಿಲಾಯುಗ ಕಾಲದಿಂದಲೂ ಮಾನವನ ಅತ್ಯುತ್ತಮ ಪ್ರಿಯ ಸಹಚರಜೀವಿ ಎಂಬುದಕ್ಕೆ ಡೆನ್ಮಾರ್ಕನಲ್ಲಿ ಸಿಕ್ಕಿದ ಅವಶೇಷಗಳೇ ಗುರುತು. ಇಲ್ಲಿ ಸಿಕ್ಕಿದ ಮೂಳೆಗಳು 1600-7000 ದಷ್ಟು ಹಿಂದಿನವೆಂದು ತಿಳಿದುಬರುತ್ತವೆ. ಆಮೇಲೆ ನಾಯಿಗಳು ಮೆಸಪೊಟೇಮಿಯಾದ ಕಣಿವೆ ಮತ್ತು ಅದರ ಪೂರ್ವ ಪ್ರದೇಶದಲ್ಲಿ ಕಾಣಬಂದವು. ಮೊಟ್ಟ ಮೊದಲಿಗೆ ಯಾವ ಸ್ಥಳದಲ್ಲಿ ಮನುಷ್ಯ ಇವನ್ನು ಸಾಕಲಾರಂಭಿಸಿದ ಎಂಬುದಕ್ಕೆ ಸರಿಯಾದ ಪುರಾವೆಗಳು ಸಿಕ್ಕದಿದ್ದರೂ ಮಧ್ಯೆ ಯುರೋಪಿನ ಯಾವುದೋ ಒಂದು ಪ್ರದೇಶದಲ್ಲಿ ಈ ಕಾರ್ಯ ನಡೆದಿರಬೇಕೆಂದು ಊಹಿಸಲಾಗಿದೆ.

    ಈಗ ಜೀವಿಸಿರುವ ನಾಯಿಗಳೆಲ್ಲಾ ಕಾರ್ನಿವೋರ ಗಣದ ಕೇನಿಡೀ ಕುಟುಂಬಕ್ಕೆ ಸೇರಿದ ಕೇನಿಸ್ ಜಾತಿಯ ಫೆಮಿಲಿಯಾರಿಸ್ ಪ್ರಭೇದಕ್ಕೆ ಸೇರಿವೆ. ತೋಳಗಳು, ಗುಳ್ಳೆ ನರಿಗಳು (ಜ್ಯಾಕಲ್) ಆಸ್ಟ್ರೇಲಿಯಾದ ಡಿಂಗೋ ಮತ್ತು ಕಯೋಟ್‍ಗಳು ಇದರ ಹತ್ತಿರ ಸಂಬಂಧಿಗಳು. ಇವು ಕೂಡ ಕೇನಿಸ್ ಜಾತಿಗೆ ಸೇರಿವೆ. ಕೇನಿಡೀ ಕುಟುಂಬದ ವಲ್ಪೆಸ್, ಯುರೋಸಯನ್ ಮತ್ತು ಅಲೋಪೆಕ್ಸ್ ಜಾತಿಗಳಿಗೆ ಸೇರಿದ ನರಿಗಳು(ಫಾಕ್ಸ್) ನಾಯಿಯ ದೂರದ ಸಂಬಂಧಿಗಳು. ನಾಯಿಯ ಇನ್ನೂ ದೂರದ ಸಂಬಂಧಿಗಳಾದ ಕಾಡುನಾಯಿಗಳು ಬೇರೆಬೇರೆ ಜಾತಿಗಳಿಗೆ ಸೇರಿವೆ. ಇವುಗಳಲ್ಲಿ ಲೈಕೋನ್ ಜಾತಿಯ ಆಫ್ರಿಕಾದ ಬೇಟೆನಾಯಿ ಇಕ್ವಿಸಿಯಾನ ಜಾತಿಯ ದಕ್ಷಿಣ ಅಮೇರಿಕಾದ ಪೊದೆನಾಯಿ ಮತ್ತು ಕುವೋನ್ ಜಾತಿಯ ಭಾರತದ ಕಾಡುನಾಯಿ (ಧೋಲ್) ಕೆಲವು.

    ನಾಯಿ ಪ್ರಥಮವಾಗಿ ಓಡುಗಾಲಿ (ಕರ್ಸೋರಿಯಲ್). ಇದು ಬೆರಳುಗಳನ್ನು ನೆಲಕ್ಕೆ ಊರಿ ನಡೆಯುವುದರಿಂದ ಇದಕ್ಕೆ ಅಂಗುಲಿಗಾಮಿ (ಡಿಜಿಟಿಗ್ರೇಡ್) ಎಂಬ ಹೆಸರೂ ಉಂಟು. ಗಾಳಿಯ ಮೂಲಕ ಹೆಚ್ಚು ತಡೆಯಾಗದಂತೆ ತೂರಿ ಹೋಗಲು ಅನುಕೂಲವಾದ ನಯವಾದ ದೇಹದ ಆಕಾರವೂ ಕಾಲುಗಳ ವೇಗದ ಚಲನೆಗೆ ಅನುಕೂಲವಾಗಿದೆ. ಕಾಲುಗಳು ಬಲವಾಗಿಯೂ ಪಾದಗಳು ದುಂಡಾಗಿಯೂ ಇವೆ. ಮುಂಗಾಲಿನ ಪಾದಗಳಲ್ಲಿ ಐದು ಬೆರಳು ಹಿಂಗಾಲಿನ ಪಾದಗಳಲ್ಲಿ ನಾಲ್ಕು ಬೆರಳುಗಳೂ ಇವೆ. ನಡೆಯುವಾಗ ಮುಂಗಾಲಿನ ಹೆಬ್ಬೆಟ್ಟುಗಳು ನೆಲಕ್ಕೆ ತಾಗುವುದಿಲ್ಲ. ಮುಂಗಾಲುಗಳಲ್ಲಿ ಹೆಬ್ಬೆಟ್ಟುಗಳಿಲ್ಲ. ಬೆರಳುಗಳನ್ನು ಊರಿ ನಡೆಯುತ್ತದೆ. ಅಂಗಾಲಿನಲ್ಲಿ ಮೃದುವಾದ ಮೆತ್ತೆಗಳುಂಟು. ಆದ್ದರಿಂದ ನಡೆಯುವಾಗ ಸದ್ದಾಗುವುದಿಲ್ಲ. ಬೆರಳುಗಳಲ್ಲಿ ಬಾಗಿರುವ ಬಲವಾದ ಉಗುರುಗಳಿವೆ. ಚರ್ಮ ಮೈಗೆ ಬಿಗಿಯಾಗಿ ಅಂಟಿಕೊಳ್ಳದೆ ಸಡಿಲವಾಗಿದೆ.

     ನಾಯಿಯ ಬಾಹ್ಯರೂಪ ಮತ್ತು ಗಾತ್ರಗಳಲ್ಲಿ ವೈವಿಧ್ಯವನ್ನು ಕಾಣಬಹುದು. ದೇಹದ ಬಣ್ಣದಲ್ಲೂ ವ್ಯತ್ಯಾಸವುಂಟು. ದೇಹ ಕಪ್ಪು, ಬಿಳಿ, ಕೆಂಪು, ಕಂದು ಬಣ್ಣದ್ದಾಗಿರಬಹುದು, ಅಲ್ಲದೆ ಬಿಳಿ ಮತ್ತು ಕಪ್ಪು, ಬಿಳಿ ಹಾಗೂ ಕೆಂಪು, ಬಿಳಿಯ ಹೊದಿಕೆಯ ಮೇಲೆ ಚುಕ್ಕೆಗಳಿರುವುದು- ಮುಂತಾದ ಮಿಶ್ರಣಗಳಿರುವುದೂ ಇದೆ. ಮೈಮೇಲಿನ ಕೂದಲು ಮೊಟಕಾಗಿರಬಹುದು ಅಥವಾ ಉದ್ದವಾಗಿರಬಹುದು. ಉದ್ದ ಕೂದಲಿನ ನಾಯಿಗಳಿಗೆ ಜೂಲು ನಾಯಿಗಳೆಂದು ಹೆಸರು. ತಲೆ ಮತ್ತು ಕಿವಿಯ ಆಕಾರ, ಕಾಲಿನ ಎತ್ತರ, ಗಾತ್ರ, ತೂಕ ಮುಂತಾದ ಲಕ್ಷಣಗಳಲ್ಲೂ ವ್ಯತ್ಯಾಸವಿರುವುದು. ನಾಯಿಗಳಲ್ಲಿ ಅತ್ಯಂತ ಸಣ್ಣ ನಾಯಿಯಾದ ಮೆಕ್ಸಿಕೋದ ಚವಾವಾ ಸುಮಾರು 1 ಕೆಜಿ ಭಾರವಿದ್ದರೆ ಅತ್ಯಂತ ದೊಡ್ಡ ನಾಯಿಯಾದ ಸೇಂಟ್ ಬರ್ನಾಡ್ ನಾಯಿಯ ತೂಕ 72ಕೆಜಿ. ಸಾಮಾನ್ಯವಾಗಿ ನಾಯಿಯ ಬಾಲ ಡೊಂಕು. ನಾಯಿಗಳು ಸಾಧಾರಣವಾಗಿ ಮಾಂಸಹಾರಿಗಳು. ಸಸ್ಯಾಹಾರವನ್ನೂ ಸೇವಿಸುವುವು. ಇವುಗಳ ಹಲ್ಲುಗಳು ಮೂಳೆಯನ್ನು ನೆಗ್ಗುವಷ್ಟು ಗಟ್ಟಿಯಾಗಿವೆ. ಅಲ್ಲದೆ ಮಾಂಸವನ್ನು ಕಿತ್ತು ಅದನ್ನು ಅಗಿಯಲು ಹಲ್ಲುಗಳು ಹೊಂದಿಕೊಂಡಿವೆ.ಇದರ ದಂತ ಸೂತ್ರ 3/3, 1/1, 4/4, 2/3 42 . ಕೋರೆ ಹಲ್ಲುಗಳು ಚೆನ್ನಾಗಿ ಬೆಳೆದಿವೆ. ಮೇಲುದವಡೆಯ ಒಂದು ಮುಂದವಡೆಹಲ್ಲು, ಕೆಳದವಡೆಯ ಮೊದಲ ದವಡೆ ಹಲ್ಲು ಮಾಂಸವನ್ನು ಅಗಿದು ತಿನ್ನಲು ಸಹಾಯಕಮಾಗಿರುವ ಕಾರ್ನೇಸಿಯಲ್ ಹಲ್ಲಾಗಿ ಮಾರ್ಪಟ್ಟಿವೆ. ನಾಯಿ ಬೆವರನ್ನು ನಾಲಿಗೆಯ ತುದಿಯಿಂದ ಸುರಿಸುವುದು. ಈ ಗುಣ ಇದಕ್ಕೆ ವಿಶಿಷ್ಟವಾದದ್ದು . ನಾಯಿ ನೀರನ್ನು ನಾಲಿಗೆಯಿಂದ ನೆಕ್ಕಿ ಕುಡಿಯುತ್ತದೆ. ನಾಯಿ ಪ್ರಾಣಿಗಳಲ್ಲೆಲ್ಲಾ ಅತ್ಯಂತ ಚುರುಕಾದ ಮತ್ತು ಬುದ್ದಿಶಾಲಿಯಾದ ಪ್ರಾಣಿ ಎನ್ನಲಾಗಿದೆ. ಇದಕ್ಕೆ ಅನೇಕ ಕೆಲಸ ಕಾರ್ಯಗಳನ್ನು ಕಲಿಸಬಹುದು. ಜ್ಞಾಪಕ ಶಕ್ತಿ ಹೆಚ್ಚು. ಕಣ್ಣು ಮತ್ತು ಕಿವಿ ಸೂಕ್ಷ್ಮ. ಸ್ಪರ್ಶೇಂದ್ರಿಯ  ಗ್ರಾಹಕಾಂಗಗಳು ಚೆನ್ನಾಗಿ ರೂಪುಗೊಂಡಿವೆ. 

   ಕೇನಿಡೀ ಕುಟುಂಬದ ಎಲ್ಲ ಪ್ರಾಣಿಗಳೂ ಅಲಿಗೊಸೀನ್ ಕಾಲದಲ್ಲಿ ಉಗಮಿಸಿದವೆಂದು ಹೇಳಲಾಗಿದೆ. ತೋಳ ಪಿತೃಗುಂಪಿನಿಂದ ಮೊದಲು ಕಾಡುನಾಯಿಗಳೂ ಆಮೇಲೆ ನರಿಗಳೂ ಹುಟ್ಟಿದವೆನ್ನಲಾಗಿದೆ. ಅನಂತರ ಆ ಪಿತೃ ಗುಂಪಿನಿಂದ ಕಯೋಟ್, ಆಫ್ರಿಕಾ ಮತ್ತು ದಕ್ಷಿಣ ಯುರೋಪಿನ ಗುಳ್ಳೆ ನರಿಗಳು ಜನ್ಮ ತಾಳಿದುವು. ಕಟ್ಟಕಡೆಯಲ್ಲಿ ತೋಳಗಳ ಒಂದು ಸಣ್ಣ ಬುಡಕಟ್ಟಿನಿಂದ ಸಾಕಿದ ನಾಯಿಗಳೂ ಆಮೇಲೆ ಈ ನಾಯಿಗಳಿಂದ ಆಸ್ಟ್ರೇಲಿಯಾದ ಡಿಂಗೋ ನಾಯಿಗಳೂ ಹುಟ್ಟಿದವು. 

  ಉಗಮ ಮತ್ತು ಚರಿತ್ರೆ : ನಾಯಿ, ತೋಳ, ಗುಳ್ಳೆ ನರಿ ಮತ್ತು ಕಯೋಟ್‍ಗಳೆಲ್ಲವೂ ಕೇನಿಸ್ ಜಾತಿಗೆ ಸೇರಿವೆ. ಕಯೋಟ್‍ಗಳು ಉತ್ತರ ಅಮೇರಿಕಾದ ನಿವಾಸಿಗಳಾದ್ದರಿಂದ ಅವು ಯುರೋಪಿನಲ್ಲಿದ್ದ ನಾಯಿಗಳ ಪೂರ್ವಜರಲ್ಲ ಎಂಬ ಅಂಶವನ್ನು ಭೌಗೋಳಿಕ ಆಧಾರಗಳ ಮೇಲೆ ತೆಗೆದುಹಾಕಬಹುದು. ಈಗಿನ ತೋಳಗಳು ಮತ್ತು ಗುಳ್ಳೆನರಿಗಳು ನಾಯಿಗಳ ಹತ್ತಿರ ಸಂಬಂಧಿಗಳು. ಕೇನಿಸ್ ಲೂಪಸ್ ಪ್ರಭೇದದ ಬೂದು ತೋಳ ನಾಯಿಯ ಪೂರ್ವಜವಾಗಿದ್ದಿರಬಹುದು. ಈ ತೋಳಗಳ ಅನೇಕ ಉಪಪ್ರಭೇದಗಳೂ ಮತ್ತು ಸ್ಥಳಿಯ ಬಗೆಗಳೂ, ಮೊದಲಿಗೆ ಯೂರೋಪ್, ಏಷ್ಯ, ಮತ್ತು ಉತ್ತರ ಅಮೇರಿಕಗಳಲ್ಲಿ ಪ್ರಸರಿಸಿದ್ದವು. ತೋಳಗಳ ಮೈಬಣ್ಣ ವೈವಿಧ್ಯಮಯ. ಕೆಲವು ಕೆಲವು ಅಚ್ಚ ಕಪ್ಪಾದರೆ ಬಿಳಿ ಮಿಕ್ಕ ಕೆಲವಲ್ಲಿ ಬೂದು ಬಣ್ಣದ ಅನೇಕ ಛಾಯೆಗಳಿದ್ದವು. ಉತ್ತರ ದೇಶಗಳ ತೋಳಗಳು ದಕ್ಷಿಣ ದೇಶಗಳ ಸಣ್ಣ ಗಾತ್ರದ ತೋಳಗಳಿಂದ ಹುಟ್ಟಿರಬಹುದೆಂಬ ಅಭಿಪ್ರಾಯವಿದೆ. ಹಾಗಾದರೆ ಗುಳ್ಳೆ ನರಿಗಳು ನಾಯಿಗಳ ಪೂರ್ವಜರಲ್ಲವೆ ಎಂಬ ವಾದಕ್ಕೆ ಅನೇಕ ಅಂಶಗಳು ಇಲ್ಲ ಎಂಬ ವಾದವನ್ನು ಪುಷ್ಟೀಕರಿಸುತ್ತದೆ. ಗುಳ್ಳೆ ನರಿಗಳ ಚೂಪಾದ ತಲೆ, ಕೂಗುವ ರೀತಿ ಹಾಗೂ ಅವುಗಳ ಸಮಾಜ ಜೀವನ ಮುಂತಾದ ಗುಣಲಕ್ಷಣಗಳು ನಾಯಿಗಳದ್ದಕಿಂತ ಬೇರೆಯಾಗಿರುವುದರಿಂದ ಗುಳ್ಳೆನರಿಗಳು ನಾಯಿಗಳ ಪೂರ್ವಜರಾಗುವುದಕ್ಕೆ ಸಾಧ್ಯವಿಲ್ಲ ಎಂದು ತಜ್ಞರ ಅಭಿಪ್ರಾಯವಿದೆ.

   ಮಾನವ ತನ್ನ ಅನುಕೂಲಕ್ಕಾಗಿ ನಾಯಿಗಳನ್ನು ಪಳಗಿಸಿದ ಮೇಲೆ ಇವುಗಳ ಬಾಹ್ಯ ರೂಪ ಮತ್ತು ಸ್ವಬಾವಗಳ ಅನೇಕ ಗುಣಗಳ ಆಯ್ಕೆಗೆ ಮೊದಲು ಮಾಡಿದ. ನಾಯಿಗಳನ್ನು ಕಾಡಿನ ಅವುಗಳ ಪೂರ್ವಜರಿಂದ ಕೆಲವು ಲಕ್ಷಣಗಳ ಮೂಲಕ ಗುರುತಿಸಬಹುದು. ಇವುಗಳಲ್ಲಿ ಮುಖ್ಯವಾದ್ದು ಬಾಲದ ಆಕಾರ. ಬಾಲ ಕೊಡಲಿಯಾಕಾರದಿಂದ ಸುರುಳಿಯಾಕಾರದವರೆಗೆ ಅನೇಕ ವ್ಯತ್ಯಾಸಗಳನ್ನು ತೋರಿಸುತ್ತದೆ. ಅತಿ ಮೊದಲು ಸಾಕಿದ ನಾಯಿಗಳ ವಿಕೃತಿಯಿಂದ ಈ ವ್ಯತ್ಯಾಸ ಕಾಣಿಸಿಕೊಂಡಿರಬಹುದು. ಆ ಗುಂಪಿನ ನಾಯಿಗಳೇ ಇತರ ಬಗೆಯ ನಾಯಿಗಳ ಪೂರ್ವಜಗಳಾಗಿರಬೇಕು. ನಾಯಿಯ ಹಲ್ಲುಗಳು ತೋಳದ ಹಲ್ಲುಗಳಿಗಿಂತ ಚಿಕ್ಕವು ಹಾಗೂ ದುರ್ಬಲ. ಆದ್ದರಿಂದ ಮಾನವ ಸಣ್ಣ ಗಾತ್ರದ ಅಪ್ರಬಲ ಹಲ್ಲುರಚನೆಯ ಹಾಗೂ ತಾನು ಸುಲಭವಾಗಿ ಪಳಗಿಸಿ ಹಿಡಿತದಲ್ಲಿಟ್ಟುಕೊಳ್ಳಬಹುದಾದ ಪ್ರಾಣಿಗಳ ಕೃತಕ ಆಯ್ಕೆಯನ್ನು ಆದಷ್ಟು ಹಿಂದೆಯೇ ಮಾಡಿರಬೇಕು.

  ವ್ಯಾಪ್ತಿ ಮತ್ತು ಚರಿತ್ರೆ : ನಾಯಿಗಳು ಮಾನವ ಸಾಕಣೆಗೆ ಒಳಗಾದ ಮೇಲೆ ಬಹು ತೀವ್ರವಾಗಿ ಪ್ರಪಂಚದ ನಾನಾಭಾಗಗಳಿಗೆ ಪ್ರಸರಿಸಿರಬಹುದು. ಉತ್ತರ ಅಮೇರಿಕಾಕ್ಕೆ ಬಿಳಿಯರು ತಮ್ಮ ಜೊತೆಯಲ್ಲಿ ನಾಯಿಗಳೊಡನೆ ಬರುವ ಹೊತ್ತಿಗೆ ಅಲ್ಲಿನ ಇಂಡಿಯನ್ ಜನಾಂಗದವರ ಹತ್ತಿರ ನಾಯಿಗಳು ಇದ್ದುವು. ಆಗ ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸುಮಾರು 20 ತಳಿಗಳಿದ್ದವು. ಆದರೆ ಕಾಲಕ್ರಮೇಣ ಮೆಕ್ಸಿಕೋದ ರೋಮ ರಹಿತ ನಾಯಿ ಹಾಗೂ ಎಸ್ಕಿಮೋ ನಾಯಿಗಳನ್ನುಳಿದು ಮಿಕ್ಕೆಲ್ಲಾ ನಾಯಿಗಳು ಕಾಣೆಯಾದುವು. 

  ಆಸ್ಟ್ರೇಲಿಯಾದ ಡಿಂಗೋ ಸಾಮಾನ್ಯವಾಗಿ ಕಾಡುಪ್ರಾಣಿ. ಈಗಲೂ ಕೆಲವು ಆದಿವಾಸಿಗಳು ಇವನ್ನು ಪಳಗಿಸಿ ಇಟ್ಟುಕೊಂಡಿದ್ದಾರೆ. ಈ ಆದಿವಾಸಿಗಳ ಪೂರ್ವಜರು ಡಿಂಗೋಗಳನ್ನು ಸಾಕಿದ ನಾಯಿಗಳಂತೆ ಆಸ್ಟ್ರೇಲಿಯಾಕ್ಕೆ ತಂದು ಆಮೇಲೆ ಸ್ವೇಚ್ಛೆಯಾಗಿರಲು ಬಿಟ್ಟಿರಬೇಕು. 

   ಆಫ್ರಿಕಾದ ಎಲ್ಲಾ ಭಾಗಗಳಲ್ಲಿ ನಾಯಿಗಳಿದ್ದುವೆಂಬುದು ಐತಿಹಾಸಿಕ ವಿಷಯ. ಈಗ ಜೀವಂತವಾಗಿರುವ ಸ್ಥಳೀಯ ತಳಿಗಳಲ್ಲೊಂದಾದ ಬ್ಯಾಸೆಂಜಿ ತಳಿಯನ್ನು ಮಧ್ಯ ಆಫ್ರಿಕಾದ ಕುಳ್ಳು ಜನಾಂಗದವರು ಈಗಲೂ ಸಾಕುತ್ತಾರೆ. ಇದೇ ರೀತಿ ನಾಯಿಗಳು ಏಷ್ಯಾ ಮತ್ತು ಆಸ್ಟ್ರೇಲಿಯಾ ಸುತ್ತುಮುತ್ತಲಿನ ಅನೇಕ ದ್ವೀಪಗಳಲ್ಲಿ ಇದ್ದುವು.

    ಮಿಕ್ಕೆಲ್ಲಾ ದೇಶಗಳ ನಾಯಿಗಳಿಗಿಂತ ಯುರೋಪಿನ ನಾಯಿಗಳ ವಿಚಾರ ಹೆಚ್ಚಾಗಿ ತಿಳಿದಿದೆ. ಬಹು ಪುರಾತನ ಕಾಲದಿಂದಲೂ ವರ್ತಕರೂ ಮತ್ತು ಪ್ರವಾಸಿಗಳೂ ತಮ್ಮ ಪ್ರೀತಿಯ ನಾಯಿಗಳನ್ನು ಜೊತೆಯಲ್ಲಿ ಬಹುದೂರದ ದೇಶಗಳಿಗೆ ತೆಗೆದುಕೊಂಡು ಹೋಗುತ್ತಿದ್ದರಲ್ಲದೆ ವಾಪಾಸು ಬರುವಾಗ ಅನೇಕ ವೇಳೆ ಹೊಸ ಮತ್ತು ವಿದೇಶಿ ತಳಿಗಳನ್ನು ತರುತ್ತಿದ್ದರು.

    ನಾಯಿಗಳ ತಳೀಕರಣ ಎಲ್ಲ ದೇಶಗಳಲ್ಲೂ ಆಗಿದೆ. ಆದರೆ ಇಂಗ್ಲೆಂಡಿನಲ್ಲಾದಷ್ಟು ಬೇರೆಲ್ಲೂ ಆಗಿಲ್ಲಾ ಎನ್ನಲಾಗಿದೆ. ಜಾನ್ ಕೇಯಸ್ ಎಂಬುವನ ಪ್ರಕಾರ 16ನೆಯ ಶತಮಾನದ ಹೊತ್ತಿಗಾಗಲೆ ಇಂಗ್ಲೆಂಡಿನಲ್ಲಿ ಗ್ರೇಹೌಂಡ್, ಟೆರಿಯರ್, ಮ್ಯಾಸ್ಟಿಫ್ ಮತ್ತು ಕುರಿಗಾಹಿನಾಯಿ (ಶೆಪರ್ಡ್ ಡಾಗ್) ಎಂಬ ಆರು  ತಳಿಗಳನ್ನು ವೃದ್ದಿಸಲಾಗಿತ್ತು. ಇದರ ಜೊತೆಗೆ ಎಸ್ಕಿಮೋಗಳ ಗಾಡಿ ಎಳೆಯುವ ನಾಯಿಗಳನ್ನು ಸೇರಿಸಬಹುದು. ದೊಡ್ಡ ಗಾತ್ರದ ಮತ್ತು ಡೊಂಕು ಬಾಲವುಳ್ಳ ಈ ನಾಯಿಗಳು ತೋಳಗಳನ್ನು ಉತ್ತರ ಯುರೋಪಿನ ಸಣ್ಣ ನಾಯಿಗಳೊಡನೆ ಅಡ್ಡ ಹಾಯಿಸಿ ಪಡೆದ ನಾಯಿಗಳು. ಇವಕ್ಕೆ ದ್ರುವ ಅಥವಾ ಸ್ಪಿಟ್ಸ್ ಗುಂಪಿನ ನಾಯಿಗಳೆಂದು ಹೆಸರು.

   ಇದೇ ರೀತಿ ಸಾಮಾನ್ಯ ಬಗೆಯ ನಾಯಿಗಳು ಪ್ರಪಂಚದಾದ್ಯಮತ ಕಂಡುಬಂದಿದ್ದರೂ ಅವುಗಳ ದೇಹದ ರೂಪ ಮತ್ತು ನಡವಳಿಕೆಗೆ ಸಂಬಂಧಿಸಿದ ಅನೇಕ ಅಮುಖ್ಯ ಗುಣಗಳು ಈಚೆಗೆ ಕಣ್ಮರೆಯಾಗಿವೆ. ಅನೇಕ ಪ್ರಾಚೀನ ತಳಿಗಳು ಬಹುವಾಗಿ ಬದಲಾಯಿಸಿದೆ, ಇಲ್ಲವೆ ಪೂರ್ಣವಾಗಿ ಕಾಣೆಯಾಗಿವೆ. ಆದರೆ ಇರಾಕಿನ ಎರಡು ತಳಿಗಳಾದ ಸಲೂಕಿ ಮತ್ತು ಕುರ್ದಿಷ್ ಮಂದೆ ನಾಯಿಗಳನ್ನು ಇವತ್ತಿಗೂ ಕಾಣಬಹುದು. ದೊಡ್ಡ ಗಾತ್ರದ ಕುರ್ದಿಷ್ ನಾಯಿ ಕ್ರಿ.ಪೂ.2200 ರಲ್ಲಿ ಬ್ಯಾಬಿಲೋನಿಯಾ ಕಲೆಯಲ್ಲಿ ಚಿತ್ರಿತವಾದ ಮ್ಯಾಸ್ಟಿಫ್ ಮತ್ತು ಯುದ್ದದ ನಾಯಿಗಳನ್ನು ಹೋಲುತ್ತದೆ. ವಿವಿಧ ನಾಯಿ ತಳಿಗಳಲ್ಲಿ ಒಂದನ್ನು ಮತ್ತೊಂದು ತಳಿಯೊಡನೆ ಸಾಮಾನ್ಯವಾಗಿ ಸಂಕರಿಸುವುದರಿಂದ ಅವುಗಳ ಪೂರ್ವಜಗಳÀನ್ನು ಗುರುತಿಸುವುದು ಕಷ್ಟವಾಗುವುದು.

  ಬಹುತೇಕ ತಳಿಗಳ ಹೆಣ್ಣು ನಾಯಿಗಳು ಸಾಮಾನ್ಯವಾಗಿ ಒಂದು ವರ್ಷದೊಳಗಾಗಿ ಕೆಲವು ¸ಂಧರ್ಭಗಳಲ್ಲಿ ಆರು ತಿಂಗಳೊಳಗಾಗಿ ಬೆದೆಗೆ ಅಥವಾ ಈಸ್ಟ್ರಸ್‍ಗೆ ಬರುತ್ತವೆ. ಈ ವಿಷಯದಲ್ಲಿ ವಿವಿಧ ತಳಿಗಳಲ್ಲಿ ಮತ್ತು ಒಂದೇ ತಳಿಯ ವಿವಿಧ ಪ್ರಾಣಿಗಳಲ್ಲಿ ಹೆಚ್ಚಿನ ವೈವಿದ್ಯ ಕಂಡುಬರುತ್ತದೆ. ಆಫ್ರಿಕಾದ ಬ್ಯಾಸೆಂಜಿ ಹೆಣ್ಣು ನಾಯಿ ಋತುಚಕ್ರವನ್ನು ತೋರಿಸುತ್ತದೆ. ಇದು ವರ್ಷಕ್ಕೊಂದಾವರ್ತಿ ಶರತ್ಕಾಲದಲ್ಲಿ ಬೆದೆಗೆ ಬರುವುದು. ಅನೇಕ ಸಾಕು ನಾಯಿ ತಳಿಗಳು ವರ್ಷದ ಯಾವ ಋತುವಿನಲ್ಲಾದರೂ ಸುಮಾರು ಆರು ತಿಂಗಳಿಗೊಂದಾವರ್ತಿ ಬೆದೆಗೆ ಬರುತ್ತದೆ. ಒಂದೊಂದು ನಾಯಿಯಲ್ಲೂ ಸಾಮಾನ್ಯವಾಗಿ ಒಂದು ಗೊತ್ತಾದ ಮಾದರಿ ಇರುವುದು. ಆದರೆ ಬೆದೆಯ ಅವಧಿ ಚಕ್ರ ಕಡಿಮೆ ಅಥವಾ ಹೆಚ್ಚಾಗುವುದು ಸಾಮಾನ್ಯ. 

   ಗರ್ಭಾವಸ್ಥೆಯ ಕಾಲ ಸುಮಾರು ಒಂಬತ್ತು ವಾರಗಳು. ಮರಿಗಳ ಗಾತ್ರ ಆಯಾ ತಳಿಯ ವಯಸ್ಕ ನಾಯಿಯ ಗಾತ್ರವನ್ನವಲಂಬಿಸಿ ವ್ಯತ್ಯಾಸವಾಗುತ್ತದೆ. ಹಾಗೆಯೆ ಮರಿಗಳ ಸಂಖ್ಯೆಯಲ್ಲೂ ವ್ಯತ್ಯಾಸವುಂಟು. ಆಟಿಕೆ ತಳಿಗಳಲ್ಲಿ ಮರಿಗಳ ಸಂಖ್ಯೆ ಸಾಮಾನ್ಯವಾಗಿ 1-2 ಕ್ಕಿಂತ ಹೆಚ್ಚಾಗಿಲ್ಲ. ಆದರೆ ದೊಡ್ಡ ಗಾತ್ರದ ತಳಿಗಳು 8-10 ಮರಿಗಳನ್ನು ಹಾಕುವುದು. ಆದರೂ 4-6 ಮರಿಗಳು ಸಾಮಾನ್ಯ.  ಹೆಣ್ಣು ನಾಯಿಯ ಪ್ರಜನನ ಶಕ್ತಿ ಅದಕ್ಕೆ 5 ವರ್ಷ ವಯಸ್ಸಾದ ಅನಂತರ ಕಡಿಮೆಯಾಗುತ್ತದೆ. ಋತುಚಕ್ರ ಸಾಮಾನ್ಯವಾಗಿ ಎಂಟನೆಯ ವಯಸ್ಸಿಗೆ ನಿಂತುಹೋಗುತ್ತದೆ. ಗಂಡು ನಾಯಿಯ ಪ್ರಜನನ ಸಾಮಥ್ರ್ಯ ಇನ್ನೂ ಸ್ವಲ್ಪ ಹೆಚ್ಚು ವಯಸ್ಸಿನವರೆಗೂ ಇರುವುದು. ನಾಯಿಗಳ ಸಂಪೂರ್ಣ ಆಯಸ್ಸು ಸುಮಾರು ಇಪ್ಪತ್ತು ವರ್ಷಗಳು.

ವರ್ತನೆ ಮತ್ತು ಸ್ವಭಾವ : ನಾಯಿಗಳು ತಮ್ಮ ಪೂರ್ವಜರಾದ ತೋಳಗಳ ಸ್ವಭಾವವನ್ನೇ ತೋರುತ್ತದೆ. ನಾಯಿ ತಾನು ವಾಸ ಮಾಡುವ ಸ್ಥಳ ಅಥವಾ ಯಜಮಾನನ ಮನೆಯನ್ನು ಬೇರೆ ನಾಯಿ ಅಥವಾ ಆಗಂತುಕರಿಂದ ರಕ್ಷಿಸುವುದು. ನಾಯಿಗಳು ಪ್ರಾಂತೀಯತೆಯ ಸ್ವಭಾವವನ್ನು ವ್ಯಕ್ತಪಡಿಸುವುದರಿಂದ ಹೀಗೆ ಮಾಡುತ್ತವೆ ಎನ್ನಲಾಗಿದೆ. ಮಲಗುವುದಕ್ಕೆ ಮುನ್ನ ಸುತ್ತುಸುತ್ತು ತಿರುಗಿ ಆಮೇಲೆ ಮಲಗುತ್ತದೆ. ಈ ಸ್ವಭಾವ ಅದರ ಪೂರ್ವಜರ ಒಂದು ಗುಣ. ನಾಯಿಯ ಪೂರ್ವಜ ಪ್ರಾಣಿಗಳು ಕಾಡಿನಲ್ಲಿ ವಾಸಿಸುತ್ತಿದ್ದಾಗ ಹುಲ್ಲು ಬೆಳೆದ ಜಾಗಗಳಲ್ಲಿ ಮಲಗುತ್ತಿದ್ದವು. ಇದೇ ಸ್ವಭಾವ ನಾಯಿಯಲ್ಲಿ ಇನ್ನೂ ಇದೆ. ನಾಯಿಗಳು ತಮ್ಮ ಗುರುತಿಗಾಗಿ ಕೆಲವು ಗಡಿ ಪ್ರದೇಶಗಳನ್ನು ಮಾಡಿಕೊಳ್ಳುತ್ತವೆ. ಅವು ತಮ್ಮ ವಾಸ ಸ್ಥಳದಿಂದ ಹೊರ ಹೊರಟು ಸ್ವಲ್ಪ ದೂರದಲ್ಲಿ ಮೂತ್ರ ಅಥವಾ ಮಲ ವಿಸರ್ಜನೆ ಮಾಡುವುವು. ಈ ಸ್ಥಳಗಳೇ ಅವುಗಳ ಗುರುತಿನ ವಾಸನೆಯ ಸ್ಥಳಗಳು. ಇಂಥ ವರ್ತನೆಯಿಂದ ಅವು ಮನೆ ಅಥವಾ ವಾಸಸ್ಥಾನಗಳಿಂದ ಬಹು ದೂರ ಹೋದರೂ ವಾಸನೆಯ ಸ್ಥಳಗಳನ್ನು ತಮ್ಮ ಸೂಕ್ಷ್ಮ ಜ್ಞಾನೇಂದ್ರಿಯ ಶಕ್ತಿಯಿಂದ ಗುರುತಿಸಿ ಹಿಂದಿರುಗುವುವು. ಇದು ಆಹಾರವನ್ನು ತಿನ್ನುವಾಗ ಗಬಗಬನೆ ಕಬಳಿಸುವುದಕ್ಕೆ ಮತ್ತೊಂದು ಪ್ರಾಣಿ ಆಕ್ರಮಣ ಮಾಡುವುದೇ ಎಂಬ ಭಯವೇ ಕಾರಣವಿರಬಹುದು. ನಾಯಿಗಳು ಸ್ವಾಭಾವಿಕವಾಗಿ ಜಗಳ ಪ್ರವೃತ್ತಿಯವು. ಅಪರಿಚಿತ ಪ್ರಾಣಿಗಳ ಅಥವಾ ಮನುಷ್ಯರ ಮೇಲೆ ಬೀಳುವುದೂ, ಕೋಪ ಬಂದಾಗ ಗುರುಗುಡುವುದು, ಹೊಗಳಿದಾಗ ಅಥವಾ ಸಂತೋಷವಾದಾಗ ಬಾಲವನ್ನು ಅಲ್ಲಾಡಿಸುವುದು, ಭಯವಾದಾಗ ಬಾಲವನ್ನು ಹಿಂಗಾಲುಗಳ ನಡುವೆ ತೂರಿಸಿ ಮುದುರಿಕೊಳ್ಳುವುದೂ ನಾಯಿಗಳ ಕೆಲವು ಗುಣಗಳು.ಸಾಮಾನ್ಯವಾಗಿ ಎಲ್ಲ ತಳಿಯ ನಾಯಿಗಳೂ ಸಾಕಿದವನ ಆಜ್ಞೆಗಳನ್ನೂ, ಧ್ವನಿ ಕೈಸನ್ನೆಗಳನ್ನೂ ತಿಳಿದು ಅದರಂತೆ ನಡೆಯುತ್ತವೆ. ಸಾಕಿದವನಲ್ಲಿಯೂ ಆತನ ಆಪ್ತರಲ್ಲಿಯೂ, ಪ್ರೀತಿಯನ್ನು ತೋರಿಸುವುವು. ಧಣಿಗೋಸ್ಕರ ಧೈರ್ಯದಿಂದ ಕಾದಾಡುವುದಲ್ಲದೆ, ಕೆಲವು ವೇಳೆ ಅವನಿಗೋಸ್ಕರ ಪ್ರಾಣವನ್ನು ತೆರಲು ಸಿದ್ದವಾಗುವುವು. ಒಟ್ಟಿನಲ್ಲಿ ನಾಯಿ ಸ್ವಾಮಿನಿಷ್ಠೆಯ ಪ್ರತೀಕ. 

  ನಾಯಿಗಳು ತಮ್ಮ ಪ್ರಣಯಾಚರಣೆಯಲ್ಲಿ ವಿಶೇಷ ರೀತಿಯ ಚಟುವಟಿಕೆಯನ್ನು ತೋರಿಸುತ್ತವೆ. ಗಂಡು ಹೆಣ್ಣುಗಳು ತಮ್ಮ ದೇಹವನ್ನು ತಗ್ಗಿಸಿ ಮುಂಗಾಲುಗಳನ್ನು ಮುಂದೂಡುತ್ತವೆ. ಆಮೇಲೆ ತಮ್ಮ ತಲೆಗಳನ್ನು ನೆಟ್ಟಗೆ ಮಾಡಿ ಒಂದಕ್ಕೊಂದು ಉಜ್ಜುವುವು. ತರುವಾಯ ತಮ್ಮ ಮುಂಗಾಲುಗಳನ್ನು ಮತ್ತೊಂದರ ಸುತ್ತ ಹಾಕಿ ಆಡುತ್ತವೆ. ಇದಾದ ಮೇಲೆ ಒಂದನ್ನೊಂದು ಅಟ್ಟಿಸಿ ಸ್ವಲ್ಪ ದೂರ ಹೋಗುವುವು. ಈ ವಿಧವಾಗಿ ವಿವಿಧ ರೀತಿಯ ಪ್ರಣಯಾಚರಣೆ ಚಟುವಟುಕೆಗಳನ್ನು ವ್ಯಕ್ತಪಡಿಸಿ ಅವು ಕೂಡುತ್ತವೆ. ಮರಿಗಳು ಹುಟ್ಟಿದ ಮೊದಲ ಮೂರು ವಾರಗಳು ತಾಯಿ ಹಾಲು ಕೊಟ್ಟು ಸಾಕುತ್ತವೆ. 

   ಪ್ರವೃತ್ತಿಯ ಬೆಳವಣಿಗೆ : ನಾಯಿಯ ಪೂರ್ಣ ಬೆಳವಣಿಗೆಯ ಅವಧಿಯನ್ನು ಕೆಲವು ನಿಖರವಾದ ಕಾಲಗಳನ್ನಾಗಿ ವಿಂಗಡಿಸಬಹುದು : 1. ಹುಟ್ಟಿದ ಹೊಸತರ ಕಾಲ : ಮರಿ ಹುಟ್ಟಿದ ದಿನದಿಂದ ಹಿಡಿದು ಸುಮಾರು 14 ದಿವಸಗಳವರೆಗಿನ ಅವಧಿ. ಆಗ ತಾನೆ ಹುಟ್ಟಿದ ಮರಿ ಕಣ್ಣು ಮುಚ್ಚಿಕೊಂಡೇ ಇರುವುದು. ಕಿವಿಗಳ ಚಟುವಟಿಕೆಯು ಇರುವುದಿಲ್ಲ. ಆದ್ದರಿಂದ ಇದಕ್ಕೆ ಹೊರ ಪ್ರಪಂಚದ ಅರಿವು ಇರದು. ಹುಟ್ಟಿದ ಮೊದಲ ದಿನಗಳು ಮರಿ ಹೆಚ್ಚು ನಿದ್ದೆಯಲ್ಲೇ ಕಳೆಯುತ್ತದೆ. ತಾಯಿ ಮರಿಗಳನ್ನು ತನ್ನ ಹತ್ತಿರವೇ ಇಟ್ಟುಕೊಂಡು ಅವುಗಳ ದೇಹವನ್ನು ಬೆಚ್ಚಗಿಟ್ಟಿರುತ್ತದೆ.

  2. ಪರಿವರ್ತನೆಯ ಕಾಲ : ಸುಮಾರು 14 ದಿನಗಳ ತರುವಾಯ ಮರಿ ಕಣ್ಣುಗಳನ್ನು ತೆರೆಯುತ್ತದೆ. ಇದು ಮರಿಯ ಬೆಳವಣಿಗೆಯ ಪರಿವರ್ತನೆಯ ಕಾಲದ ಪ್ರಾರಂಭವನ್ನು ಸೂಚಿಸುವುದು. ಮೂರನೆಯ ವಾರದಲ್ಲಿ ಮರಿಯ ಸ್ವಭಾವದಲ್ಲಿ ಮತ್ತು ಸಂವೇದಕ ಹಾಗೂ ವಾಹಕ ಕ್ರಿಯೆಗಳ ಸಾಮಥ್ರ್ಯದಲ್ಲಿ ಶೀಘ್ರ ಬದಲಾವಣೆಯಾಗುತ್ತದೆ. ಈ ಕಾಲದಲ್ಲಿ ಮರಿ ಶಬ್ದಗಳಿಗೆ ಪ್ರತಿಕ್ರಿಯೆಯನ್ನು ತೋರಿಸುವುದು. ಆದರೆ ಶ್ರವಣ ಸಾಮಥ್ರ್ಯ ಪ್ರಕಟಗೊಳ್ಳುತ್ತದೆ. ಅಲ್ಲದೆ ಪ್ರಥಮ ಹಲ್ಲುಗಳು ಕಾಣಿಸಿಕೊಂಡು ಮರಿ ಗಟ್ಟಿಯಾದ ಆಹಾರವನ್ನು ತಿನ್ನಲು ಪ್ರಯತ್ನಿಸುತ್ತದೆ.

  3. ಸಾಂಘಿಕತೆಯ ಕಾಲ :ಮರಿ ತೆವಳುವುದನ್ನು ಬಿಟ್ಟು ಓಡಾಡುವ ಪ್ರಯತ್ನವನ್ನು ಮತ್ತು ಮನುಷ್ಯ ಹಾಗೂ ಇತರ ನಾಯಿಗಳೊಡನೆ ಇರಲು ಇಷ್ಟಪಡುತ್ತದೆ. ಈ ಕ್ರಿಯೆಗಳು ಸಹವಾಸ ಪ್ರಕ್ರಿಯೆಗೆ ನಾಂದಿ. ಆಮೇಲೆ ಹೊಸ ಮನುಷ್ಯರನ್ನು ಸಮೀಪಿಸುವುದಕ್ಕೆ , ಬಾಲವನ್ನು ಅಲ್ಲಾಡಿಸುವುದಕ್ಕೆ ಮತ್ತು ಗಲಾಟೆ ಮಾಡುವುದಕ್ಕೆ ಮೊದಲು ಮಾಡುತ್ತದೆ. ತನ್ನ ಜೊತೆಯ ಮರಿಗಳೊಡನೆ ವಿನೋದಕ್ಕಾಗಿ ಜಗಳವಾಡುವುದು ಇದರ ಮತ್ತೊಂದು ಸಹವಾಸದ ಪ್ರತಿಕ್ರಿಯೆ. ಈ ಸಾಂಘಿಕತೆಯ ಕಾಲದಲ್ಲಿ ಅಂದರೆ 10 ವಾರಗಳಲ್ಲಿ ಮರಿ ಮತ್ತು ಯಜಮಾನನ ನಡುವೆ ಸಾಂಘಿಕ ಸಂಬಂಧವನ್ನು ಬೆಳೆಸುವುದು ಸುಲಭಸಾಧ್ಯ.

    ಮರಿಯನ್ನು ನಾಲ್ಕು ವಾರಗಳಾದ ಮೇಲೆ ಅದರ ತಾಯಿ ಮತ್ತು ಇತರ ಮರಿಗಳಿಂದ ಬೇರ್ಪಡಿಸಿದರೆ ಅದು ಸಾಕುವವರಿಗೆ ಅನುಗುಣವಾಗಿ ಬೆಳೆಯುವುದು. ಮರಿಯನ್ನು ಅದರ ಜೊತೆಯ ಮರಿಗಳಿಂದ ಬೇರ್ಪಡಿಸಿದಾಗ ಅದು ಒಂದೇ ಸಮನೆ ಕುರೊ ಎಂದು ಗಲಾಟೆ ಮಾಡುವುದು. ಆದರೆ ಅದನ್ನು ಪ್ರಿತಿಯಿಂದ ಕಂಡು ಜೊತೆಯಾಗಿದ್ದರೆ ಅದರ ಮನೋಗಲಭೆ ಕಡಿಮೆಯಾಗಿ ಯಜಮಾನನೊಡನೆ ಹೊಂದಿಕೊಂಡು ಸಂತೋಷದಿಂದಿರುತ್ತದೆ. ಮರಿಯನ್ನು ಆದಷ್ಟು ದೊಡ್ಡದಾದ ಮೇಲೆ ಬೇರ್ಪಡಿಸಿದರೆ ಅದು ಇತರ ನಾಯಿಗಳೊಡನೆ ಇರಲು ಹೆಚ್ಚು ಇಷ್ಟಪಡುವುದು. ಮರಿಯನ್ನು ಮನುಷ್ಯನಿಂದ ದೂರವಾಗಿ ಬೆಳೆಸಿದರೆ 14 ವಾರಗಳಲ್ಲಿ ಅದು ಕ್ರೂರ ಪ್ರವೃತ್ತಿಯುಳ್ಳದ್ದಾಗುತ್ತದೆ. ಆದ್ದರಿಂದ ಈ ಕಾಲ ಸಾಮಾಜಿಕ ಸಂಬಂಧಗಳನ್ನು ತಿಳಿಯಲು ಬಹು ಮುಖ್ಯವಾದ ಕಾಲ. ಮರಿ ಈ ಕಾಲದಲ್ಲಿ ತನ್ನ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಮರಿಯ ಮುಂದಿನ ಮನೆ ಯಾವುದಾಗುವುದೆಂದು ತಿಳಿದು ಆ ಪರಿಸರಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಆದಷ್ಟು ಜಾಗ್ರತೆ ನಿರ್ಧರಿಸುವುದು ಮುಖ್ಯ. ಮರಿಗಳನ್ನು 12 ವಾರಗಳಿಗಿಂತ ಹೆಚ್ಚಾಗಿ ಮನೆಯಿಂದಾಚೆಗೆ ಬಿಡದೆ ಗೂಡಿನ ವಾತಾವರಣದಲ್ಲೇ ಬೆಳೆಸಿ ಅನಂತರ ಹೊರ ಪ್ರಪಂಚಕ್ಕೆ ಬಿಟ್ಟರೆ ಅವು ಸಾಮಾನ್ಯವಾಗಿ ನಾಚಿಕೆ ಸ್ವಭಾವ ಮತ್ತು ಅಂಜಿಕೆ ಪ್ರವೃತ್ತಿಯುಳ್ಳದ್ದಾಗುವುವು. ಆದ್ದರಿಂದ ನಾಯಿಗಳನ್ನು ತಮಗೆ ಬೇಕಾದ ಪರಿಸರದಲ್ಲಿ ಬೆಳೆಸಬೇಕಾದರೆ ಸುಮಾರು 8-10 ವಾರಗಳ ವಯಸ್ಸಿನೊಳಗಾಗಿ ಮರಿಗಳಿಗೆ ಸರಿಯಾದ ತರಬೇತಿ ಕೊಡಬೇಕು.

  4. ಯೌವನದ ಕಾಲ : ಸಾಂಘಿಕ ಕಾಲವಾದ ಮೇಲೆ ಯೌವನದ ಕಾಲ ಪ್ರಾರೊಭವಾಗುವುದು. ಇದು ಋತುಕಾಲದವರೆಗೂ ಮುಂದುವರೆಯುತ್ತದೆ. ಅಂದರೆ ಸಾಧಾರಣವಗಿ 6 ತಿಂಗಳ ವಯಸ್ಸಿನಿಂದ ಪ್ರಾಯದವರೆಗೆ. ಈ ಕಾಲದಲ್ಲಿ ಕಷ್ಟಕರವಾದ ತರಬೇತಿ ಕ್ರಮಗಳನ್ನು ಪ್ರಯತ್ನಿಸಕೂಡದು.

   ಸಣ್ಣ ವಯಸ್ಸಿನಲ್ಲಿ ತರಬೇತಿ :ಸಾಮಾನ್ಯವಾಗಿ ನಾಯಿಯ ನರಮಂಡಲ 8 ವಾರ ವಯಸ್ಸಿನ ಹೊತ್ತಿಗೆ ಪೂರ್ಣ ಬೆಳೆದಿರುತ್ತದೆ. ಆದ್ದರಿಂದ ಮನೆಯ ಸಾಕುನಾಯಿಗೆ 8-12 ವಾರ ವಯಸ್ಸಿನಲ್ಲಿಯೇ ಮೂಲ ತರಬೇತಿ ಕೊಡಲು ಬಹು ಒಳ್ಳೆಯ ಅವಧಿ. ಈ ಸಂಧರ್ಭದಲ್ಲಿ ನಾಯಿಗೆ ಬಾ, ಕುಳಿತುಕೊ, ಹೋಗು, ಆ ಪದಾರ್ಥವನ್ನು ತೆಗೆದುಕೊಂಡು ಬಾ ಎಂಬ ಆಜ್ಞೆಗಳನ್ನು ಕಲಿಸಬಹುದು. ಈ ಕಾಲ ಅದರ ಸ್ವಭಾವದ ಬೆಳವಣಿಗೆಗೂ ಮುಖ್ಯ. 

   ತಳೀಕರಣ ಮತ್ತು ಸಂತಾನವೃದ್ಧಿ : ನಾಯಿಗಳ ಪೂರ್ವಜರಾದ ತೋಳಗಳ ಗಾತ್ರ ಮತ್ತು ಬಾಹ್ಯ ರೂಪಗಳಲ್ಲಿ ಬಹು ವೈವಿದ್ಯ ಉಂಟು. ಅಂತೆಯೇ ಅವುಗಳಿಂದ ಹುಟ್ಟಿ ಬಂದ ನಾಯಿಗಳು ಸಹ ಸಾಕು ಪ್ರಾಣಿಗಳಲೆಲ್ಲಾ ಅತಿ ಹೆಚ್ಚಿನ ವೈವಿಧ್ಯ ತೋರಿಸುವುವು.  ವ್ಯತ್ಯಾಸಗಳು ವಿವಿಧ ತಳಿಗಳ ನಡುವೆ ಕಂಡುಬರುವುದಲ್ಲದೆ, ಒಂದೇ ತಳಿಯ ವಿವಿಧ ಪ್ರಾಣಿಗಳಲ್ಲೂ ಉಂಟು. 

   ತಳಿ ಶಾಸ್ತ್ರದ ಪ್ರಕಾರ ಯಾವ ತಳಿಯೂ ಶುದ್ದ ತಳಿ ಎನ್ನುವ ಹಾಗಿಲ್ಲ. ತಳಿ ಎಂದರೆ ಕೃತಕ ಆಯ್ಕೆಯಿಂದ ಒಂದು ಮಿತಿಯಲ್ಲಿಟ್ಟುಕೊಳ್ಳಬಹುದಾದ ವೈವಿಧ್ಯ ಇರುವ ಒಂದು ಸಂದಣಿ.

   ಕೆಲವು ಬಾಹ್ಯ ಗುಣಗಳು ಅನುವಂಶೀಯವಾದುವೆಂದು ತಿಳಿದಿದೆ.  ಯಾವ ಗುಣಗಳು ಅನುವಂಶೀಯವಾಗಿ ಕಾಣಿಸಿಕೊಳ್ಳುವೆಂಬುದನ್ನು ಸಂತಾನವೃದ್ದಿ ಪ್ರಯೋಗಗಳಿಂದ ಪ್ರತಿಪಾದಿಸಬಹುದು. ಅನೇಕ ಜೀನುಗಳು ದೇಹದ ಬಣ್ಣಕ್ಕೆ ಸಂಬಂಧಿಸಿವೆ. ಇಲ್ಲಿ ದೇಹದ ಬಣ್ಣದ ಮೇಲೆ ಪ್ರಭಾವ ಬೀರುವ ಕೆಲವು ಮುಖ್ಯ ಜೀನುಗಳ ವಿವರಣೆಯನ್ನು ಕೊಟ್ಟಿದೆ.

  ಪೂರ್ವಜ ತೋಳದ ಬೂದು ಬಣ್ಣ ಅಥವಾ ಮೂಲ ಮಾದರಿ ಹೊದಿಕೆಯಲ್ಲಿ ಹೊರ ರಕ್ಷಣೆಯ ಉದ್ದಕೂದಲು ಕಪ್ಪು ಮತ್ತು ಕೆಂಪು ಬಣ್ಣಗಳ ಪಟ್ಟೆಯಿಂದಲೂ ಕೆಳಹೊದಿಕೆ ತೆಳು ಬಣ್ಣದ್ದಾಗಿಯೂ ಇವೆ. ಕೆಳ ಹೊದಿಕೆ ಚಳಿಗಾಲದಲ್ಲಿ ಒತ್ತಾಗಿ ಬೆಳೆದು ಬೇಸಗೆಯಲ್ಲಿ ಉದುರಿ ಹೋಗುತ್ತದೆ. ಮೂಲ ಮಾದರಿಯಂತೆ ವ್ಯತಿರಿಕ್ತ ಛಾಯೆಯ ಬಣ್ಣ ಪ್ರಸರಿಸುವುದು. ಅಂದರೆ ದೇಹದ ಮೇಲ್ಭಾಗದಲ್ಲಿ ಹೆಚ್ಚು ಕಪ್ಪು ಬಣ್ಣವೂ ಹೊಟ್ಟೆಯ ಭಾಗದಲ್ಲೂ ಬೆಳ್ಳಗೂ ಇರುವುದು. ಆದ್ದರಿಂದ ಮೂಲತಃ ಕಪ್ಪು ಮತ್ತು ಕೆಂಪಿನ  ಎರಡು ವರ್ಣ ದ್ರವ್ಯಗಳಿರುವುವು. ವರ್ಣದ್ರವ್ಯಗಳಿಲ್ಲದಿರುವಾಗ ದೇಹ ಬಿಳಿ ಬಣ್ಣದ್ದಾಗಿರುತ್ತದೆ. ಸಾಕುನಾಯಿಗಳಲ್ಲಿ ಮೂಲ ಹೊದಿಕೆ ಉದ್ದ, ರಚನೆ, ಮಾದರಿ ಮತ್ತು ಬಣ್ಣಗಳ  ವಿವಿಧ ಸಂಯೋಗಗಳ ಫಲವಾಗಿ ಭಿನ್ನ ರೀತಿಯದ್ದಾಗಿದೆ. 

   ಬಣ್ಣವನ್ನು ಬದಲಾಯಿಸುವ ಸರಣಿ ಜೀನುಗಳಲ್ಲಿ ಂ ಸರಣಿಯ ಜೀನುಗಳು ಪ್ರಮುಖವಾದುವು. ಈ ಜೀನುಗಳನ್ನು ಅವುಗಳ ಪ್ರಬಲತೆಯ ದೃಷ್ಟಿಯಿಂದ ಈ ಅನುಕ್ರಮದಲ್ಲಿ ಪಟ್ಟಿಮಾಡಬಹುದು.
ಂs ಜೀನು ಕಡು ಕಪ್ಪು ಬಣ್ಣ
ಙ ಜೀನ್-ಕೆಂಪು, ಸ್ವಚ್ಛ ಕೆಂಪಿನಿಂದ ಕಪ್ಪು ಮಿಶ್ರಿತ ಕೆಂಪು ಬಣ್ಣದವರೆಗೆ ವ್ಯತ್ಯಾಸವಾಗುವ ಬಣ್ಣ.
ಂತಿ ಮೂಲ ಮಾದರಿ ಅಥವಾ ತೋಳ ಬೂದು
ಚಿಣ (ಕಪ್ಪು ಮತ್ತು ಕೆಂಪು) ಅಂದರೆ ದೇಹದ ಮೇಲ್ಭಾಗದಲ್ಲಿ ಅಚ್ಚ ಕಪ್ಪು ಬಣ್ಣವೂ ಕೆಳಭಾಗದಲ್ಲಿ ಸ್ವಚ್ಛ ಕೆಂಪು, ಕಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಇರುವುವು.

ಂ  ಸರಣಿ ಜೀನುಗಳ ಮೇಲೆ ಪ್ರಭಾವ ಬೀರುವ ಕೆಲವು ಜೀನುಗಳು ಉಂಟು. ಇವುಗಳಲ್ಲಿ ee ಎಂಬ ದುರ್ಬಲ ಜೀನುಗಳು ಎಲ್ಲಾ ಕಪ್ಪು ಕೂದಲನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವುವು. bb ಜೀನುಗಳು ಕಪ್ಪು ಬಣ್ಣದ ಕೂದಲನ್ನು ಕಂದು ಬಣ್ಣವನ್ನಾಗಿ ಬದಲಾಯಿಸುತ್ತವೆ. ಬೇರೆ ಜೀನ್‍ಗಳು ದೇಹದ ಬಣ್ಣಕ್ಕೆ ಕಾರಣವಾದ ವರ್ಣಕಗಳನ್ನು ಇನ್ನೂ ಹೆಚ್ಚಾಗಿ ಮಾರ್ಪಡಿಸಿ ಬಣ್ಣದಿಂದ ತೆಳುಬಣ್ಣದ ಎಲ್ಲಾ ಛಾಯೆಗಳಿಗೂ ಕಾರಣವಾಗಬಹುದು.

  ಇವಲ್ಲದೆ ವಿವಿಧ ಗಾತ್ರದ ಬಿಳಿ ಚುಕ್ಕೆ ಹಾಗೂ ಬಿಳಿಯ ಬಣ್ಣದ ಹೊದಿಕೆಗೆ ಕಾರಣವಾದ ಇನ್ನೊಂದು ಸರಣಿಯ ಜೀನುಗಳೂ ಇವೆ. 

 ತಳಿಶಾಸ್ತ್ರ : ಕೂದಲಿನ ಉದ್ದ, ಹೊದಿಕೆಯ ರಚನೆಯ ಗುಣಗಳು ಅನುವಂಶೀಯ ಗುಣಗಳಾದರೂ, ಹೊದಿಕೆ ಬಣ್ಣದ ಗುಣದಷ್ಟು ಪ್ರಭಾವಿತವಾದುದಲ್ಲ. ಒಟ್ಟಿನಲ್ಲಿ ಕೂದಲಿನ ಉದ್ದ ಮತ್ತು ಹೊದಿಕೆಯ ರಚನೆಯ ಗುಣಗಳಲ್ಲಿ ಮೋಟುತನ, ಒರಟುತನ, ನೇರಕೂದಲು ಮತ್ತು ಹೊರಟು ಹೊದಿಕೆ, ನಿಬಿಡ ಹೊದಿಕೆ, ಮುಂತಾದ ಗುಣಗಳು ಅನ್ವಯವಾಗಿ ಉದ್ದ, ನಯ, ಗುಂಗುರು ಕೂದಲು, ನಯ ಹೊದಿಕೆ ಮತ್ತು ಒತ್ತು ಕೂದಲಿನ ಹೊದಿಕೆಯ ಗುಣಗಳಿಗಿಂತ ಪ್ರಭಾವಿತವಾದುವು.

ಈ ಗುಣಗಳಲ್ಲಿ ಸಾಧ್ಯವಾಗುವ ಅನೇಕ ಸಂಯೋಗಗಳಿವೆ.
ಆಕಾರ : ನಾಯಿಯ ದೇಹದ ಆಕಾರದಲ್ಲಿ ಬಹಳ ಹಿಂದೆಯೇ ಆದ ವಿಕೃತಿಯಿಂದ (ಮ್ಯುಟೇಶನ್) ಬಾಲ ಮೇಲ್ಮುಖವಾಗಿ ಬಾಗಿಕೊಂಡಿದೆ. ಇದರ ಅನುವಂಶೀಯತೆಯ ವಿಷಯದ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಡಾಷ್‍ಹೌಂಡ್ ಮತ್ತು ಬ್ಯಾಸೆಟ್‍ಹೌಂಡ್ ಮುಂತಾದ ತಳಿಗಳ ಮೋಟುಕಾಲುಗಳು ಪ್ರಮುಖ ವಿಕೃತಿಯಿಂದ ಉಂಟಾಗಿದೆ. ಮೊಟುಕಾಲಿನ ನಾಯಿ ಮತ್ತು ಸಾಮಾನ್ಯ ರೀತಿ ಕಾಲುಗಳಿರುವ ಮೊದಲನೆಯ ಸಂಕರದಿಂದ ಇವೆರಡರ ಮಧ್ಯಂತರ ಎತ್ತರದ ಕಾಲಿನ ನಾಯಿಗಳು ಹುಟ್ಟುತ್ತವೆ. ಬುಲ್‍ಡಾಗ್ ವಿಕೃತಿ ಮುಖ್ಯವಾಗಿ ತಲೆಗೆ ಸಂಬಂಧಿಸಿದ್ದು. ಈ ವಿಕೃತಿಯಿಂದ ಮುಸುಡಿ ಚಿಕ್ಕದಾಗಿ ಚಪ್ಪಟೆಯಾಗಿದ್ದು ಕೆಳದವಡೆ ಮುಂಚಾಚಿರುವುದು. ಬುಲ್‍ಡಾಗ್ ಮತ್ತು ಸಾಮಾನ್ಯ ರೀತಿ ಮುಖವಿರುವ ನಾಯಿಗಳ ಸಂಕರದಿಂದ ಮೊದಲ ಪೀಳಿಗೆಯಲ್ಲೆ ಇವೆರಡರ ಮಧ್ಯಂತರ ಮುಖವಿರುವ ನಾಯಿಗಳು ಹುಟ್ಟುವುವು. 

  ಕಿವಿಯ ಆಕಾರ ಮತ್ತು ರಚನೆ ಕೂಡ ಒಂದು ಅನುವಂಶಿಯ ಗುಣ. ನೆಟ್ಟಗಿರುವ ಕಿವಿಗಳಿಂದ ಉದ್ದವಾಗಿರುವ ಜೋಲು ಕಿವಿಗÀಳವರೆಗೂ ವಿವಿಧ ರೀತಿಯ ಕಿವಿಗಳು ಕಂಡುಬರುತ್ತವೆ. 

 ತೂಕ : ನಾಯಿಗಳಲ್ಲಿ ಬಹುವಾಗಿ ಬದಲಾಗುವ ಒಂದು ಮುಖ್ಯ ಗುಣವೆಂದರೆ ದೇಹದ ತೂಕ, ಚವಾವ ಮುಂತಾದ ಕುಬ್ಜ ತಳಿಗಳು ಒಂದು ಕೆಜಿಗಿಂತ ಕಡಿಮೆ ತೂಕವಿದ್ದರೆ ಮಾಸ್ಡಿಫ್, ಸೇಂಡ್ ಬರ್ನಾಲ್ಡ್ ಮುಂತಾದ ದೊಡ್ಡ ತಳಿಗಳು ಸುಮಾರು 72 ಕೆಜಿಗಳಷ್ಟು ಭಾರ ಇರುವುವು.   ಈ ಗುಣ ಕೂಡ ಅನೇಕ ಜೀನುಗಳ ಪ್ರಭಾವಕ್ಕೆ ಒಳಪಟ್ಟಿದೆ.

 ನಡವಳಿಕೆ ಮತ್ತು ಸ್ವಭಾವ : ಈ ಗುಣಗಳ ಅನುವಂಶೀಯತೆ ಬಹು ಜಟಿಲವಾದದ್ದು. ಒಂದು ತಳಿಯ ಗುಣ ಸ್ವತಂತ್ರವಾಗಿ ಹರಿಯುವ ಅನೇಕ ಗುಣಗಳ ಒಕ್ಕೂಟದ ಮೇಲೆ ಆಧಾರಿತವಾಗಿದೆ. ಒಂದೊಂದು ಗುಣಕ್ಕೂ ಒಂದು ಅಥವಾ ಎರಡು ಮುಖ್ಯ ಜೀನುಗಳು ಇವೆ. ಇವುಗಳ ಜೊತೆಗೆ ಕೆಲವು ಅಮುಖ್ಯ ಜೀನುಗಳು ಸೇರಿರಬಹುದು.  ಉದಾ : ಕಾಕರ್ ಸ್ಟೇನಿಯಲ್‍ನ ಬಾಗಿ ಕುಳಿತುಕೊಳ್ಳುವ ಸ್ವಭಾವ ಎರಡು ಸ್ವತಂತ್ರ ಗುಣಗಳಾದ ಬಾಗಿ(ಮುದುರಿ) ಕುಳಿತುಕೊಳ್ಳುವ ಮತ್ತು ನಿಶ್ಯಬ್ದವಾಗಿರುವ ಸ್ವಭಾವಗಳನ್ನು ಆಧರಿಸಿದೆ.
   ಮನುಷ್ಯನ ಜೊತೆ ಜೀವಿಸುವ ಪ್ರಾಣಿಗಳಲ್ಲೆಲ್ಲಾ ನಾಯಿಗಳು ಬಹುಮುಖ್ಯವಾದುವು. ವಿಶೇಷ ಹಾಗೂ ಉದ್ದೇಶಪೂರ್ವಕ ಆಯ್ಕೆಯಿಂದ ಪೂರ್ವಜ ತೋಳಗಳ ಗುಣಗಳು ಸಾಕಿದ ವಿವಿಧ ತಳಿಗಳ ನಾಯಿಗಳಲ್ಲಿ ವೃದ್ಧಿಯಾಗಿವೆ ಅಥವಾ ಕಡಿಮೆಯಾಗಿವೆ. ಈ ವಿಶೇಷ ಗುಣಗಳನ್ನು ಅನುಸರಿಸಿ ಮನುಷ್ಯ ವಿವಿಧÀ ತಳಿಗಳನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಂಡಿದ್ದಾನೆ.
ಬೇಟೆನಾಯಿಗಳು : ಹೌಂಡ್ ತಳಿಯ ನಾಯಿಗಳು ಬೇಟೆಯ ವಾಸನೆಯನ್ನು ಹಿಡಿದು ಬೇಟೆಯಾಡುತ್ತವೆ. ವಾಸನೆಯ ಜಾಡನ್ನು ಬಿಟ್ಟುಕೊಂಡು ಓಡುವ ಭೂಸ್ತನಿಗಳನ್ನು ಅವುಗಳ ಜಾಡಿನ ಆಧಾರದ ಮೇಲೆ ಪತ್ತೆಹಚ್ಚಿ ಅವುಗಳ ಹಿಂದೆ ಓಡಿ ಹಿಡಿಯಲು ಈ ತಳಿಗಳನ್ನು ಉಪಯೋಗಿಸುವರು. ಹೌಂಡ್ ನಾಯಿಗಳು ವಾಸನೆಯಿಂದಲೂ ಮತ್ತು ಚುರುಕಾದ ಕಣ್ಣುಗಳಿಂದಲೂ ಬೇಟೆಯನ್ನು ಪತ್ತೆಹಚ್ಚುತ್ತವೆ. ಬೇಟೆನಾಯಿಗಳಲ್ಲಿ ಹೌಂಡ್ ನಾಯಿಯಲ್ಲದೆ ಇನ್ನೂ ಕೆಲವು ಗುಂಪುಗಳುಂಟು. ಹಕ್ಕಿಯ ಬೇಟೆಯಾಡುವಾಗ ಪಾಯಿಂಟರ್ಸ್ , ಸೆಟ್ಟರ್ ಮತ್ತು ರಿಟ್ರೀವರ್ ತಳಿಯ ನಾಯಿಗಳನ್ನು ಉಪಯೋಗಿಸುತ್ತಾರೆ. ಹಾರುವ ಹಕ್ಕಿಗಳನ್ನು ಬೇಟೆಯಾಡುವುದು ಕಷ್ಟ. ಅವು ಕುಳಿತುಕೊಂಡಾಗ ಅವುಗಳನ್ನು ಹಿಂಬಾಲಿಸಿದ ನಾಯಿಗಳು ಅಲ್ಲಿಯೇ ನಿಂತು ಬೇಟೆಗಾರ ಬರುವವರೆಗೂ ಕಾದು ಹಕ್ಕಿ ಇರುವ ತಾವನ್ನು ತೋರಿಸುತ್ತದೆ. ಇಂಥ ತಳಿಗಳಿಗೆ ಪಾಯಿಂಟರ್  ಮತ್ತು ಸೆಟ್ಟರ್ ನಾಯಿಗಳೆಂದು ಹೆಸರು. ರಿಟ್ರೀವರ್ ತಳಿಗಳು ಹೊಡೆದ ಗುಂಡನ್ನು ಗುರುತಿಸಿ, ಹಿಂಬಾಲಿಸಿ ಗುಂಡಿಗೆ ಆಹುತಿಯಾದ ಹಕ್ಕಿಯನ್ನೋ ಅಥವಾ ಪ್ರಾಣಿಯನ್ನೋ ಹುಡುಕಿ ಅದನ್ನು ಬೇಟೆಗಾರನಿಗೆ ತಂದೊಪ್ಪಿಸುತ್ತದೆ. ಸ್ಪೇನಿಯಲ್ ಮುಂತಾದ ತಳಿಗಳು ಕುಳಿತಿರುವ ಹಕ್ಕಿಗಳನ್ನು ಗಾಬರಿಗೊಳಿಸಿ ಅವು ಮೇಲಕ್ಕೆದ್ದು ಹಾರಿ ಹೋಗುವಂತೆ ಮಾಡುವುವು. ಆಗ ಬೇಟೆಗಾರ ಹಾರುವ ಹಕ್ಕಿಯನ್ನು ಬೇಟೆಯಾಡಲು ಸುಲಭವಾಗುತ್ತದೆ. ಸ್ಪೇನಿಯಲ್‍ಗಳಲ್ಲಿ ಎರಡು ಬಗೆಗಳುಂಟು. ಬೇಟೆಯಾದ ಜಲಪಕ್ಷಿಗಳನ್ನು ನೀರಿನಿಂದ ಹೊರತರಲು ಉಪಯೋಗಿಸುವ ತಳಿಗಳನ್ನು ಜಲಸ್ಪೇನಿಯಲ್ ಎಂದು ನೆಲದ ಪ್ರಾಣಿಗಳನ್ನು ಬೇಟೆಯಾಡುವಾಗ ಉಪಯೋಗಿಸುವವನ್ನು ನೆಲಸ್ಪೇನಿಯಲ್ ಎಂದು ಕರೆಯುವರು. ಮೊದಲಿಗೆ ನೆಲ ಸ್ಪೇನಿಯಲ್‍ಗಳನ್ನು ಡೇಗೆಗಳ ಬೇಟೆಯಲ್ಲಿ ಬಳಸಲಾಗುತ್ತಿತ್ತು.

  ಅತಿವೇಗವಾಗಿ ಚಲಿಸುವ ಮತ್ತು ಸೂಕ್ಷ್ಮ ದೃಷ್ಟಿಯುಳ್ಳ ವಿವಿಧ ಗ್ರೇಹೌಂಡ್ ತಳಿಗಳನ್ನು ಮೈದಾನ ಪ್ರದೇಶದಲ್ಲಿ ಬೇಟೆಯನ್ನು ಹಿಂಬಾಲಿಸಿ ಹಿಡಿಯಲು ಬಳಸುವರು.

  ಕೋಪ ಸ್ವಭಾವದ ಟೆರಿಯರ್ ತಳಿಯ ನಾಯಿಗಳು ನೆಲದ ಬಿಲಗಳಲ್ಲಿ ವಾಸ ಮಾಡುವ ಮೊಲ, ಮುಂಗುಸಿ, ಮುಳ್ಳುಹಂದಿ ಮುಂತಾದ ಪ್ರಾಣಿಗಳ ವಾಸನೆ ಹಿಡಿದು ಬಿಲದೊಳಗೆ ಹೊಕ್ಕು ಹಿಡಿದು ತರುವುವು. ಟೆರಿಯರ್‍ಗಳಲ್ಲಿ ಹಲವು ವಿಧಗಳಿವೆ. ಉದಾ: ಫಾಕ್ಸ್ ಟೆರಿಯರ್, ಐರ್‍ಡೇಲ್ ಟೆರಿಯರ್ ಇತ್ಯಾದಿ.
 ಆದಿನಾಯಿಗಳಲ್ಲಿ ವಿವಿಧ ಬೇಟೆಗಳಿಗೆ ಆಯ್ಕೆ ಮಾಡಿದ ಮೇಲೆ ಕೆಲವು ತಳಿಗಳಲ್ಲಿ ಪಿತೃ ತೋಳಗಳ ಕೆಲವು ಗುಣಗಳು ವೃದ್ಧಿಯಾಗಿ ಅವಕ್ಕಿಂತ ಶೀಘ್ರಗಾಮಿಗಳಾದ ಗ್ರೇಹೌಂಡ್, ಕೋಪಿಷ್ಠ ಮತ್ತು ಕ್ರೂರಿಗಳಾದ ಟೆರಿಯರ್‍ಗಳು ಉತ್ತಮ ಜಾಡುಗಾರ ತಳಿಗಳು ಉತ್ಪತ್ತಿಯಾದುವು. 
  ಅನೇಕ ತಳಿಗಳನ್ನು ಮನೆಕಾಯಲು ಮತ್ತು ಅನೇಕ ರಕ್ಷಣೆ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ಇವನ್ನು ರಕ್ಷಣೆ ಮತ್ತು ಕಾವಲು ನಾಯಿಗಳೆನ್ನುವರು. ಜರ್ಮನ್ ಕುರಿಗಾಹಿ ಮತ್ತು ಡಾಮರ್‍ಮೆನ್ ಪಿನ್ಷರ್‍ಮುಂತಾದ ತಳಿಗಳು ಪೋಲಿಸರಿಗೆ ರಕ್ಷಣಾ ಕಾರ್ಯಗಳಲ್ಲೂ ಕಾವಲಿಗೂ ಅಪರಾಧಿಗಳನ್ನು ಪತ್ತೆಹಚ್ಚುವ ಕೆಲಸಗಳಿಗೂ ನೆರವಾಗುವುವು. ಅಲ್ಲದೆ ಯುದ್ದ ಕಾಲದಲ್ಲಿ ಗಸ್ತು ತಿರುಗುವ ,ಸ್ಕೌಟಿಂಗ್ ಹಾಗೂ ಕಾವಲು ಸಿಪಾಹಿಗಳ ಅನೇಕ ಕಾರ್ಯಗಳಲ್ಲೂ ಇವು ಸಹಾಯ ಮಾಡುತ್ತವೆ. ಕುರಿ, ಆಡು ಮತ್ತು ದನಗಳ ಮಂದೆಗಳನ್ನು ಕಾಯಲು ಕೆಲವು ತಳಿಗಳಿವೆ. ಇವನ್ನು ಕುರಿ ಮತ್ತು ದನಗಾಹಿ ನಾಯಿಗಳೆನ್ನುವರು. ಹಿಂದಿನ ಕಾಲದಲ್ಲಿ ಕುರಿ, ದನದ ಮಂದೆಗಳನ್ನು ಮಾಂಸಹಾರಿಗಳಾದ ತೋಳ ಮತ್ತು ನರಿಗಳಿಂದ ರಕ್ಷಿಸಲು ದೊಡ್ಡ ಬಲಶಾಲಿ ಹಾಗೂ ಮುಂಗೋಪಿ ನಾಯಿಗಳನ್ನು ಆಯ್ಕೆಮಾಡುತ್ತಿದ್ದರು. ಜರ್ಮನಿಯ ರಾಟ್‍ವಿಲ್ಲರ್ಸ್ ತಳಿ ಒಳ್ಳೆಯ ದನಗಾಹಿ ನಾಯಿಗಳೆಂದು ಹೆಸರಾಗಿದೆ.

 ಹೇಳಿಕೊಟ್ಟದ್ದನ್ನು ಜಾಗ್ರತೆ ಕಲಿಯುವ ಮತ್ತು ಆಜ್ಞೆಗಳನ್ನು ಪರಿಪಾಲಿಸುವ ವಿಧೇಯತಾ ಗುಣದ ಪ್ರವೃತ್ತಿಗಳಿರುವ ಸಣ್ಣ ಅಥವಾ ಸಾಧಾರಣ ಗಾತ್ರದ ನಾಯಿಗಳಾದ ಬಾರ್ಡರ್ ಕಾಲಿಸ್ ಮುಂತಾದ ತಳಿಗಳನ್ನು ಆರಿಸುವರು. ಗಾಲಿಗಳಿಲ್ಲದ ಗಾಡಿಗಳನ್ನು ಎಳೆಯುವುದಕ್ಕಾಗಿ ಉತ್ತರ ದ್ರುವ ಹಿಮಪ್ರದೇಶದಲ್ಲಿ ಬಳಸುವ ನಾಯಿಗಳನ್ನು ಸ್ಲೆಡ್ ನಾಯಿಗಳೆನ್ನುವರು. ಬಿಳಿಯರು ಕುದುರೆಗಳನ್ನು ಉತ್ತರ ಅಮೇರಿಕಕ್ಕೆ ತರುವ ಮುನ್ನ ಅಲ್ಲಿನ ಸ್ಥಳೀಯ ಇಂಡಿಯನ್ ಜನ ಗಾಲಿಯಿಲ್ಲದ ಗಾಡಿಗಳಿಗೆ ನಾಯಿಗಳನ್ನು ಕಟ್ಟುತ್ತಿದ್ದರು.

  ಅನೇಕರು ಮುದ್ದಿಗಾಗಿ ಮತ್ತು ವಿನೋದಕ್ಕಾಗಿ ನಾಯಿಗಳನ್ನು ಸಾಕುತ್ತಾರೆ. ಇವುಗಳಿಗೆ ವಿನೋದ ಅಥವಾ ಮುದ್ದುನಾಯಿಗಳೆಂದು ಹೆಸರು. ಸಾಮಾನ್ಯವಾಗಿ ಎಲ್ಲ ತಳಿಯ ನಾಯಿಗಳನ್ನೂ ಈ ಉದ್ದೇಶಕ್ಕಾಗಿ ಆಯ್ಕೆಮಾಡುವುದುಂಟು. ಆದರೆ ಮನೆಗಳಲ್ಲಿ ಮುದ್ದು ಪ್ರಾಣಿಯಾಗಿರಲು ಸುಲಭವಾಗಿ ಹತೋಟಿಯಲ್ಲಿಡ ಬಹುದಾದ  ಪುಟ್ಟ ನಾಯಿಗಳನ್ನು ಆರಿಸುವರು. ಅನೇಕ ಆಟಿಕೆ ನಾಯಿ ತಳಿಗಳನ್ನು ಮುದ್ದುನಾಯಿಗಳನ್ನಾಗಿ ಬೆಳೆಸುತ್ತಾರೆ. ಮುದ್ದಿಗಾಗಿ ಸಾಕುವ ತಳಿಗಳಲ್ಲಿ ಸನ್ಣ ಅಥವಾ ಸಾಧಾರಣ ಗಾತ್ರದ ಫಾಕ್ಸ ಟೆರಿಯರ್ , ಕಾಕರ್ ಸ್ಟೇನಿಯಲ್, ಪೊಮರೆನಿಯನ್ ಮತ್ತು ಬೀಗಲ್ ತಳಿಯ ನಾಯಿಗಳು ಬಹು ಅಚ್ಚುಮೆಚ್ಚಿನ ತಳಿಗಳಾಗಿವೆ. ಈ ನಾಯಿಗಳು ಮುದ್ದಿನ ಪ್ರಾಣಿಗಳಷ್ಟೆ ಅಲ್ಲದೆ ಮನೆಯನ್ನು ಕೂಡ ಕಾಯುವುವು. 

  ಪಶ್ಚಿಮದ ಅನೇಕ ದೇಶಗಳಲ್ಲಿ ಕುರುಡರಿಗೆ ದಾರಿಯನ್ನು ತೋರಲು ಮತ್ತು ಅವರ ನಿತ್ಯದ ಕಾರ್ಯಗಳಲ್ಲಿ ಅವರ ಮುಖ್ಯ ಸಂಗಾತಿಗಳಾಗಿ ನೆರವಾಗಲು ನಾಯಿಗಳಿಗೂ ಅವುಗಳ ಯಜಮಾನರಿಗೂ ತಕ್ಕ ಶಿಕ್ಷಣವನ್ನು ಕೊಡುವ ಕ್ರಮ ಇದೆ. ಇಂಥ ನಾಯಿಗಳು ತಮ್ಮ ಯಜಮಾನರಿಗೆ ಸಹಾಯ ಮಾಡಿ ಅವರ ಕಣ್ಣುಗಳಾಗಿ ಕೆಲಸಮಾಡುತ್ತವೆ. ಈ ಕೆಲಸಕ್ಕೆ ಜರ್ಮನ್ ಕುರಿಗಾಹಿ(ಅಲ್‍ಸೇಶಿಯನ್) ಡಾಮರ್‍ಮೆನ್ ಪಿನ್ಷರ್, ಬಾಕ್ಸರ್ ಮುಂತಾದ ತಳಿಗಳನ್ನು ಆಯ್ಕೆ ಮಾಡುವರು. ಅಲ್‍ಸೇಶಿಯನ್ ತಳಿಗಳನ್ನು ಆರಿಸುವುದೇ ಸಾಮಾನ್ಯ. ಇವಕ್ಕೆ ಮಾರ್ಗದರ್ಶಕ ನಾಯಿಗಳೆಂದು ಹೆಸರು.
  ಅಲ್ಲದೆ ಮನುಷ್ಯ ನಾಯಿಗಳನ್ನು ಸಂಶೋಧನೆ ಕಾರ್ಯಗಳಲ್ಲೂ ಉಪಯೋಗಿಸುತ್ತಾನೆ. ನಾಯಿಗಳ ಮೇಲೆ ನಡೆಸಿದ ಕೆಲವು ಪ್ರಯೋಗಗಳಿಂದ ಪ್ರಾಣಿಗಳ ಮತ್ತು ಮನುಷ್ಯನ ಆರೋಗ್ಯವನ್ನು ಉತ್ತಮಗೊಳಿಸುವ ಅನೇಕ ವಿಷಯಗಳು ತಿಳಿದುಬಂದಿವೆ. ರಷ್ಯನ್ ಚಯಾಪಚಯ ತಜ್ಞ ಪಾವ್‍ಲೋವ್ ನಿಯಮಾಧೀನ ಪ್ರತಿಕ್ರಿಯಾತ್ಮಕ  ವಿಷಯಗಳನ್ನು ತಿಳಿಯಲು ನಾಯಿಗಳನ್ನು ತನ್ನ ಪ್ರಯೋಗಗಳಿಗೆ ಉಪಯೋಗಿಸಿದ್ದು ಎಲ್ಲರೂ ತಿಳಿದ ವಿಷಯ. ನಾಯಿಗಳನ್ನು ವೈದ್ಯಕೀಯ ರಂಗದಲ್ಲೂ ಬಳಸಲಾಗಿದೆ. ಇನ್‍ಸುಲಿನ್ ಚುಚ್ಚು ಮದ್ದನ್ನು ಪರೀಕ್ಷಿಸಲು ಮೊದಲು ನಾಯಿಗಳನ್ನೇ ಮಾಧ್ಯಮವಾಗಿ ಉಪಯೋಗಿಸಿದ್ದರು.

  ನಾಯಿಗಳು ತಮ್ಮ ಗುಣಲಕ್ಷಣಗಳಲ್ಲಿ ಮಿಕ್ಕ ಸಾಕುಪ್ರಾಣಿಗಳಿಗಿಂತ ಹೆಚ್ಚಿನ ವೈವಿಧ್ಯವನ್ನು ತೋರುವುದರಿಂದ ಅನುವಂಶೀಯತೆ ಮತ್ತು ಸ್ವಭಾವಗಳ ಸಂಬಂಧವನ್ನು ತಿಳಿಯಲು ಇವು ಬಹು ಉತ್ತಮ ಪ್ರಾಣಿಗಳೆನಿಸಿಕೊಂಡಿವೆ.
  ನಾಯಿಗಳ ರೋಗಗಳು ಮತ್ತು ಪರಾವಲಂಬಿಗಳು : ನಾಯಿಗಳು ಅನೇಕ ರೋಗಗಳಿಗೆ ತುತ್ತಾಗುವುವು.  ಈ ರೋಗಗಳು ಬ್ಯಾಕ್ಟೀರಿಯಾ, ವೈರಸ್ ಅಥವಾ ಪರಾವಲಂಬಿಗಳಿಂದ ಉಂಟಾಗಬಹುದು. ಇವು ನಾಯಿಯ ಜೀವನ ಕ್ರಮ, ಅವು  ವಾಸಿಸುವ ಪ್ರದೇಶದ ಹವಾಗುಣವನ್ನು ಆಧರಿಸಿದೆ. ನಾಯಿಗಳಿಗೆ ಕ್ಯಾನ್ಸರ್, ಹೃದಯರೋಗ ,ಚರ್ಮರೋಗ ಮುಂತಾದ ರೋಗಗಳು ಬರುವುದುಂಟು.

  ನಾಯಿಗಳ ಮುಖ್ಯವಾದ ಹಲವು ರೋಗಗಳಲ್ಲಿ ಇನ್‍ಪ್ಲುಯೆಂಜ ಜ್ವರದಂಥ ಡಿಸ್‍ಟೆಂಪರ್ ರೋಗವೂ ಒಂದು. ಇದು ಬಹು ದಿನ ನರಳಿಸುವ ಕಾಯಿಲೆ. ವೈರಸ್‍ಗಳಿಂದ ಉಂಟಾಗುª ಈ ಸಾಂಕ್ರಾಮಿಕ ರೋಗದಿಂದ ನಾಯಿಗಳು ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತÀವೆ. ಈ ಜ್ವರವನ್ನು ತಡೆಗಟ್ಟಲು ಚುಚ್ಚುಮದ್ದನ್ನು ಕೊಡಲಾಗುತ್ತದೆ.

ಯಕೃತ್ತು ಊತ ರೋಗ : ಈ ರೋಗ ವೈರಸ್‍ಗಳಿಂದ ಉಂಟಾಗುವುದು.  ಯಕೃತ್ತಿನ ಕ್ರಿಯೆಯನ್ನು ಕೆಡಿಸುವ  ವೈರಸ್‍ಗಳು ಮೂತ್ರದ ಮೂಲಕ ಹರಡುವುವು. ಈ ರೋಗದ ಪ್ರಾರಂಭದಲ್ಲಿ ತೀವ್ರವಾದ ಜ್ವರ ಬರುತ್ತದೆ. ಇದು ಡಿಸ್‍ಟೆಂಪರ್ ಜ್ವರದಷ್ಟು ಕಾಲ ಇರುವ ಜ್ವರವಲ್ಲ, ಹಾಗೂ ಅದರಷ್ಟು ಸಾಂಕ್ರಾಮಿಕವಲ್ಲ. ಈ ರೋಗವನ್ನು ಚುಚ್ಚುಮದ್ದಿನಿಂದ ತಡೆಗಟ್ಟಬಹುದು.
  ನಾಯಿ ಹುಚ್ಚು (ಜಲಭಯ ರೋಗ) : ಇದು ಬಹು ಮಾರಕ ರೋಗ. ಇವಲ್ಲದೆ ಟ್ರಾನ್ಸಿಲೈಟಿಸ್, ಇನ್‍ಫ್ಲುಯೆಂಜ ಮುಂತಾದ ರೊಗಗಳಿಗೂ ನಾಯಿಗಳು ತುತ್ತಾಗುತ್ತವೆ.

  ನಾಯಿಗಳಿಗೆ ಅನೇಕ ಪರೋಪಜೀವಿಗಳು ಅಂಟುತ್ತವೆ.  ಇವುಗಳಲ್ಲಿ ಬಾಹ್ಯ ಪರೋಪಜೀವಿ ಮತ್ತು ಅಂತರ ಪರೋಪಜೀವಿ ಎಂದು ಎರಡು ವಿಧ. 
  ಅಂತರ್ ಪರೋಪ ಜಾತಿಯಲ್ಲಿ ಅನೇಕ ರೀತಿಯ ದುಂಡುಹುಳುಗಳು ಮತ್ತು ಲಾಡಿಹುಳುಗಳೂ ಸೇರಿವೆ. ದುಂಡು ಹುಳುಗಳಲ್ಲಿ ಮುಖ್ಯವಾದುವು ಅಸ್ಕ್ಯಾರಿಸ್ ಜಾತಿಯ ದುಂಡುಹುಳುಗಳು. ಇವು ನಾಯಿ ಮರಿಗಳ ಮರಣಕ್ಕೆ ಕಾರಣವಾಗಿವೆ. ಲಾಡಿಹುಳುಗಳಲ್ಲಿ ಮುಖ್ಯವಾದುವು ಎಕೈನೊಕಾಕಸ್ ಜಾತಿಯ ಲಾಡಿಹುಳು. ಸಕಾಲದಲ್ಲಿ ಹುಳುನಾಶಕ ಔಷಧಿಯನ್ನು ಕೊಡಿಸಿ ಈ ಹುಳುಗಳನ್ನು ನಾಶಮಾಡಬಹುದು. 

   ಬಾಹ್ಯ ಪರೋಪಜೀವಿಗಳಾದ ಮೈಟ್, ಹೇನು, ಉಣ್ಣೆ ಮತ್ತು ಜಿಗಟಗಳು ನಾಯಿಗಳಿಗೆ ಬಹಳ ಉಪದ್ರವಕಾರಿಗಳಾಗಿವೆ. ಮೇಂಜ್ ಎಂಬ ಚರ್ಮ ರೋಗ ಎರಡು ವಿಧದ ಮೈಟ್‍ಗಳಿಂದ ಉಂಟಾಗುತ್ತದೆ. ಈ ಪ್ರಾಣಿಗಳು ಕೂದಲಿನ ಬುಡದಲ್ಲಿ ವಾಸವಾಗಿರುವುದು. ಇವುಗಳಿಂದ ಪೀಡಿತವಾಗಿರುವ ನಾಯಿಗಳ ಕೂದಲು ಉದುರಿಹೋಗಿ ಆ ಸ್ಥಳಗಳಲ್ಲಿ ನವೆಯಾಗುವುದಲ್ಲದೆ ಊದಿ ಇಸಬು ರೀತಿಯ ಹುಣ್ಣುಗಳಾವುವು. ಈ ಕಾಯಿಲೆಗೆ ಕೆಲವು ವಾರಗಳ ಚಿಕಿತ್ಸೆ ಅಗತ್ಯ.
  ಕೆಲವು ತರನ ಉಣ್ಣೆಗಳು ನಾಯಿಯನ್ನು ಪೀಡಿಸುತ್ತವೆ. ಹುಲ್ಲು ಮತ್ತು ಸಣ್ಣ ಪೊದೆಗಳಲ್ಲಿ ವೃದ್ಧಿಯಾಗುವ ಇವು ನಾಯಿ ತನ್ನ ದೇಹವನ್ನು ಸಸ್ಯಗಳಿಗೆ ಉಜ್ಜಿದಾಗ ನಾಯಿಯ ದೇಹಕ್ಕೆ ಅಂಟಿಕೊಳ್ಳುವುವು. ಸೀಮೆ ಎಣ್ಣೆ ಅಥವಾ ಬೇರಾವ ಎಣ್ಣೆಯನ್ನು ಲೇಪಿಸಿ ಇವನ್ನು ನಿರ್ಮೂಲ ಮಾಡಬಹುದು. ಚಿಗಟಗಳು ನಾಯಿಗೆ ಬಾಧಕವಾಗಿವೆ.

  ನಾಯಿಯ ಹೇನುಗಳು ಒಂದು ನಾಯಿಯಿಂದ ಮತ್ತೊಂದು ನಾಯಿಗೆ ನೇರವಾಗಿ ವರ್ಗಾವಣೆಯಾಗುತ್ತದೆ. ಸಾಬೂನು ಹಾಕಿ ಸ್ನಾನ ಮಾಡಿಸಿ ಪ್ರೌಢ ಹೇನುಗಳನ್ನು ನಿರ್ಮೂಲ ಮಾಡಬಹುದು. ಆದರೆ ಅವುಗಳ ಮರಿಗಳನ್ನು ಅಷ್ಟು ಸುಲಭವಾಗಿ ನಾಶಮಾಡುವುದು ಆಗದು. ಆದರೂ ಕೀಟನಾಶಕ ಔಷಧಿ ಬೆರೆಸಿದ ಎಣ್ಣೆಯನ್ನು ಕೆಲವು ಸಾರಿ ಲೇಪಿಸಿ ನಿವಾರಿಸಬಹುದು.
		(ಎಸ್.ವಿ.ಎ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ